ಶಾಸ್ತ್ರೀ, ಲಾಲ್ ಬಹಾದ್ದೂರ್ 
	1904-66. ಸ್ವತಂತ್ರ ಭಾರತದ ಮೂರನೆಯ ಪ್ರಧಾನ ಮಂತ್ರಿ (1964-66) ಹಾಗೂ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು. ಲಾಲ್‍ಬಹದ್ದೂರ್‍ಶಾಸ್ತ್ರಿ 1904 ಅಕ್ಟೋಬರ್ 2ರಂದು ವಾರಾಣಸಿಯ ಮೊಗಲ್ ಸರಾಯಿಯಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ಲಾಲ್ ಬಹಾದ್ದೂರ್ ಶ್ರೀವಾಸ್ತವ. ತಂದೆ ಶಾರದಾ ಪ್ರಸಾದ್, ಶಾಲಾಶಿಕ್ಷಕ. ತಾಯಿ ರಾಮ್‍ದುಲಾರಿದೇವಿ. ಒಂದೂವರೆ ವರ್ಷದ ಬಾಲಕನಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡು ಇವರು ಅತ್ಯಂತ ಆರ್ಥಿಕ ಸಂಕಷ್ಟ ಪರಿಸ್ಥಿತಿಯಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಇವರು ಮೆಟ್ರಿಕ್ ಪರೀಕ್ಷೆ ಕಟ್ಟುವ ಹೊತ್ತಿಗೆ ಅಸಹಕಾರ ಚಳವಳಿ ಆರಂಭವಾಗಿತ್ತು. ವ್ಯಾಸಂಗವನ್ನು ಕೈಬಿಟ್ಟು ಇವರು ಅಸಹಕಾರ ಚಳವಳಿಯಲ್ಲಿ ದುಮುಕಿದರು. ಅನಂತರ ವಾರಾಣಸಿಯ ಕಾಶೀವಿದ್ಯಾಪೀಠದಲ್ಲಿ ವಿದ್ಯಾಭ್ಯಾಸ ಮುಂದುವರಿಸಿ ಶಾಸ್ತ್ರೀ ಪದವಿ ಪಡೆದರು. ಅಲ್ಲಿಂದ ಮುಂದೆ ಇವರು ಲಾಲ್ ಬಹಾದ್ದೂರ್ ಶಾಸ್ತ್ರೀಯೆಂದೇ ಪ್ರಸಿದ್ಧರಾದರು. ಇವರು ಲಾಲಾ ಲಜಪತರಾಯ್ ಸ್ಥಾಪಿಸಿದ ಜನತಾ ಸೇವಾ ಸಂಘದ ಕಾರ್ಯಕರ್ತರಾಗಿ, ಸಂಘದಿಂದ 75ರೂಪಾಯಿ ಸಂಭಾವನೆ ಪಡೆದು ಸರಳ ಜೀವನ ನಡೆಸಲಾರಂಭಿಸಿದರು. ಉಪ್ಪಿನ ಸತ್ಯಾಗ್ರಹ, ಚಲೇಜಾವ್ ಚಳವಳಿಗಳಲ್ಲಿ ಭಾಗವಹಿಸಿ ಸೆರೆಮನೆ ಶಿಕ್ಷೆ ಅನುಭವಿಸಿದರು.

	ಸ್ವಾತಂತ್ರ್ಯಾನಂತರ ಭಾರತದ ಸಕ್ರಿಯ ರಾಜಕಾರಣದಲ್ಲಿ ತೊಡಗಿದ ಇವರು 1951ರಲ್ಲಿ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯಾಗಿ, ಮಹಾಚುನಾವಣೆಗಳ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದರು. 1952ರಲ್ಲಿ ರಾಜ್ಯಸಭೆಯ ಸದಸ್ಯರಾಗಿ ಕೇಂದ್ರ ಮಂತ್ರಿಮಂಡಲ ಪ್ರವೇಶಿಸಿ ರೈಲ್ವೆ ಮಂತ್ರಿಯಾದರು. 1956ರಲ್ಲಿ ತಮಿಳುನಾಡಿನ ತೂತುಕುಡಿಯಲ್ಲಿ ಭೀಕರ ರೈಲು ಅಪಘಾತವಾಗಿ ಸಾವುನೋವುಗಳು ಸಂಭವಿಸಿದ್ದರ ನೈತಿಕಹೊಣೆ ಹೊತ್ತು ಮಂತ್ರಿಪದವಿಗೆ ರಾಜೀನಾಮೆ ನೀಡಿದರು. ಅನಂತರ ಲೋಕಸಭೆಗೆ ಆಯ್ಕೆಯಾದ ಇವರು ಸಾರಿಗೆ ಸಚಿವರಾಗಿ, ಕೈಗಾರಿಕೆ ಹಾಗೂ ವಾಣಿಜ್ಯಸಚಿವರಾಗಿ ಕಾರ್ಯನಿರ್ವಹಿಸಿದರು. ಗೋವಿಂದವಲ್ಲಭ ಪಂತರು ನಿಧನರಾದ ಅನಂತರ ಕೇಂದ್ರ ಸರ್ಕಾರದ ಗೃಹ ಸಚಿವರಾಗಿಯೂ ಕಾರ್ಯನಿರ್ವಹಿಸಿದರು. ಇವರು ಸಚಿವರಾಗಿದ್ದ ಸಮಯದಲ್ಲಿ ಅಸ್ಸಾಂನಲ್ಲಿ ಉದ್ಭವಿಸಿದ ಭಾಷಾಸಮಸ್ಯೆ, ಪಂಜಾಬಿನಲ್ಲಿ ಪ್ರತ್ಯೇಕ ಪಂಜಾಬಿ ಸುಭಾ ರಚಿಸುವ ಒತ್ತಾಯ ಮುಂತಾದ ಸಮಸ್ಯೆಗಳನ್ನು ಯಶಸ್ವಿಯಾಗಿ ಬಗೆಹರಿಸಿದರು. ಮುಂದೆ ಕಾಮರಾಜರ ಯೋಜನೆಯನ್ನು ಅಂಗೀಕರಿಸಿ ಮಂತ್ರಿಪದವಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ಸನ್ನು ಬಲಪಡಿಸುವ ಸಂಘಟನಾಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. 1964ರಲ್ಲಿ ಪ್ರಧಾನಿ ಜವಹರಲಾಲ್ ನೆಹರೂ ಅವರು ತೀವ್ರ ಅಸ್ವಸ್ಥರಾದಾಗ ಇವರು ಖಾತೆರಹಿತ ಸಚಿವರಾಗಿ ಕಾರ್ಯನಿರ್ವಹಿಸಿದರು. ನೆಹರೂ ನಿಧನದ ತರುವಾಯ 1964 ಜೂನ್ 9ರಂದು ಇವರು ಭಾರತದ ಮೂರನೆಯ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಇವರು ಪ್ರಧಾನಿಯಾದ ಅನಂತರ ನೆಹರೂ ನೀತಿಗಳನ್ನೇ ಬಹುಮಟ್ಟಿಗೆ ಮುಂದುವರಿಸಿದರು. ಆರ್ಥಿಕ ಸ್ವಾವಲಂಬನೆಗೆ ಹೆಚ್ಚು ಒತ್ತು ನೀಡಿದರು. ಇವರಿಗೆ ಸಮಾಜವಾದದ ಮಿಶ್ರ ಆರ್ಥಿಕ ವ್ಯವಸ್ಥೆಯಲ್ಲಿ ನಂಬಿಕೆಯಿತ್ತು. 1964 ಅಕ್ಟೋಬರ್‍ನಲ್ಲಿ ಕೈರೋದಲ್ಲಿ ನಡೆದ ಅಲಿಪ್ತ ರಾಷ್ಟ್ರಗಳ ಎರಡನೆಯ ಸಮ್ಮೇಳನದಲ್ಲಿ ಭಾಗವಹಿಸಿದ ಇವರು ವಿಶ್ವಶಾಂತಿಯ ಮಹತ್ವವನ್ನು ಎತ್ತಿ ಹಿಡಿದು, ವಸಾಹತುಗಳ ವಿಮೋಚನೆಯಾಗಬೇಕೆಂದು ಪ್ರತಿಪಾದಿಸಿದರು. ಜನಾಂಗೀಯ ಭೇದದ ವಿರುದ್ಧ ದನಿ ಎತ್ತಿ, ಹಿಂದುಳಿದ ರಾಷ್ಟ್ರಗಳ ಆರ್ಥಿಕಾಭಿವೃದ್ಧಿಯಲ್ಲಿ ಅಂತಾರಾಷ್ಟ್ರೀಯ ಸಹಕಾರದ ಮಹತ್ತ್ವವನ್ನು ಎತ್ತಿ ಹಿಡಿದರು. ಇವರು ಸೋವಿಯತ್ ರಷ್ಯಾ, ಕೆನಡಾ ಹಾಗೂ ಬ್ರಿಟನ್‍ಗಳಿಗೆ ಭೇಟಿ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸನ್ನು ಹೆಚ್ಚಿಸಿದರು.

	ಪ್ರಧಾನಿಯಾಗಿದ್ದಾಗ (ಜೂನ್ 1964- ಜನವರಿ 66) ಕಛ್‍ನಲ್ಲಿ ಗಡಿ ವಿವಾದ ತಲೆದೋರಿ ಪಾಕಿಸ್ತಾನ ಕಾಶ್ಮೀರದ ಮೇಲೆ ಆಕ್ರಮಣ ಮಾಡಿದ, ಸಂದಿಗ್ಧ ಪರಿಸ್ಥಿತಿಯನ್ನು ಇವರು ಯಶಸ್ವಿಯಾಗಿ ಎದುರಿಸಿದರು. ಭದ್ರತಾ ಮಂಡಳಿಯ ಮಧ್ಯಸ್ತಿಕೆಯಿಂದ 33 ದಿನಗಳ ಯುದ್ಧ ಕೊನೆಗೊಂಡಿತು. ಈ ಐತಿಹಾಸಿಕ ಭಾರತ-ಪಾಕ್‍ಯುದ್ಧದಲ್ಲಿ ಪಾಕಿಸ್ತಾನವನ್ನು ಮಣಿಸದ ಲಾಲ್‍ಬಹದ್ದೂರ್‍ಶಾಸ್ತ್ರಿ ಪ್ರತಿಯೊಬ್ಬ ಭಾರತೀಯನ ಕಣ್ಮಣಿಯಾದರು. ಇಳಿಮುಖವಾಗಿದ್ದ ಭಾರತೀಯರ ಮನೋಸ್ಥೈರ್ಯವನ್ನು ಮುಗಿಲು ಮುಟ್ಟಿಸಿದ್ದು ಲಾಲ್‍ಬಹದ್ದೂರರ ಅನುಪಮ ಕಾಣಿಕೆ. ಎರಡು ರಾಷ್ಟ್ರಗಳ ನಡುವಿನ ಸಮಸ್ಯೆಗಳನ್ನು ಬಗೆಹರಿಸಲು ರಷ್ಯದ ತಾಷ್ಕೆಂಟ್‍ನಲ್ಲಿ ಒಪ್ಪಂದ ಏರ್ಪಟ್ಟಿತು. ಅನಂತರ ಇದು ತಾಷ್ಕೆಂಟ್ ಒಪ್ಪಂದವೆಂದು ಪ್ರಸಿದ್ಧವಾಯಿತು (1966 ಜನವರಿ 3ರಿಂದ 10). ರಷ್ಯದ ಅಧ್ಯಕ್ಷ ಕೊಸಿಗಿನ್‍ರ ನೇತೃತ್ವದಲ್ಲಿ ದೀರ್ಘ ಚರ್ಚೆ ನಡೆದು ಇವರು ಹಾಗೂ ಪಾಕಿಸ್ತಾನದ ಅಧ್ಯಕ್ಷ ಜನರಲ್ ಮೊಹಮ್ಮದ್ ಅಯೂಬ್ ಖಾನ್ ಈ ಒಪ್ಪಂದಕ್ಕೆ ಸಹಿ ಹಾಕಿದರು. ಭಾರತ ಹಾಗೂ ಪಾಕಿಸ್ತಾನ ಸೈನ್ಯಗಳು 1965 ಆಗಸ್ಟ್ 5ರ ಹಿಂದೆ ಇದ್ದ ಸ್ಥಳಗಳಿಗೆ ಹಿಂದಿರುಗುವುದು (ಭಾರತ ವಶಪಡಿಸಿಕೊಂಡಿದ್ದ ಪಾಕಿಸ್ತಾನದ ಹಾಜಿಪೀರ್ ಹಾಗೂ ತಿತ್‍ವಾಲ್ ಪ್ರದೇಶಗಳನ್ನು ಬಿಟ್ಟುಕೊಡುವುದು, ಪಾಕಿಸ್ತಾನ ವಶಪಡಿಸಿಕೊಂಡಿದ್ದ ಭಾರತದ ಛಾಂಬ್ ಪ್ರದೇಶ ಬಿಟ್ಟುಕೊಡುವುದು ಈ ಒಪ್ಪಂದದ ತಿರುಳು) ತಾಷ್ಕೆಂಟ್ ಒಪ್ಪಂದದ ಅನಂತರದ ಮುಕ್ತಾಯ ಸಮಾರಂಭದ ಸತ್ಕಾರ ಸ್ವೀಕರಿಸಿದ ಇವರು ಹೃದಯಾಘಾತಕ್ಕೆ ತುತ್ತಾಗಿ ಹಠಾತ್ ನಿಧನ ಹೊಂದಿದರು (1965 ಜನವರಿ 10). ಈ ಸಂದರ್ಭದಲ್ಲಿ ಪಾಕಿಸ್ತಾನದ ಜನರಲ್ ಮೊಹಮ್ಮದ್ ಅಯೂಬ್ ಭಾರತ-ಪಾಕಿಸ್ತಾನದ ಮಧ್ಯೆ ಮೈತ್ರಿಗಾಗಿ ತಮ್ಮ ಬದುಕನ್ನೇ ಬಲಿದಾನ ನೀಡಿದ ಶಾಂತಿ ಪ್ರಿಯ ವ್ಯಕ್ತಿ ಎಂದು ಉದ್ಗರಿಸಿದರು.

	ಭಾರತೀಯ ರೈತ ಹಾಗೂ ಭಾರತೀಯ ಯೋಧ-ಇವರ ಮಹತ್ತ್ವವನ್ನು ಮನಗಂಡಿದ್ದ ಶಾಸ್ತ್ರಿ ಅವರು ದೇಶಕ್ಕೆ ಜೈಕಿಸಾನ್, ಜೈ ಜವಾನ್ ಎಂಬ ಘೋಷಣೆಯನ್ನು ನೀಡಿದರು. ಜನಸಾಮಾನ್ಯರ ಸಂವೇದನೆಗಳಿಗೆ ಸ್ಪಂದಿಸಬಲ್ಲ ಜನನಾಯಕರಾಗಿ ಜನರ ಭಾಷೆಯನ್ನು ಬಲ್ಲವರಾಗಿದ್ದರು. ಮಹಾತ್ಮಾಗಾಂಧೀ ಅವರ ರಾಜಕೀಯ ವಿಚಾರಧಾರೆಯಿಂದ ಆಳವಾಗಿ ಪ್ರಭಾವಿತರಾಗಿದ್ದ ಸರಳ, ಪ್ರಮಾಣಿಕ, ನಾಯಕ. `ಪರಿಶ್ರಮ ಪ್ರಾರ್ಥನೆಗೆ ಸಮಾನ  ಎಂದು ನಂಬಿದ್ದವರು. ಬಾಪೂ ಅವರ ಹಾದಿಯಲ್ಲೇ ಅತ್ಯುತ್ತಮವೆನಿಸಿದ ಭಾರತೀಯ ಪರಂಪರೆಯ ಮೌಲ್ಯಗಳನ್ನು ನೆರೆನಂಬಿದ್ದವರು. ಇವರು ದೇಶಕ್ಕೆ ಸಲ್ಲಿಸಿದ ನಿಸ್ವಾರ್ಥ ಸೇವೆಗಾಗಿ ಇವರಿಗೆ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿನೀಡಿ ಗೌರವಿಸಲಾಯಿತು (1966).	                   
        (ಐ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ